ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕಲೆ ಮೆಚ್ಚಿದ ಕಲಾವಿದ - ರೆಂಜಾಳ ರಾಮಕೃಷ್ಣ ರಾವ್

ಲೇಖಕರು :
ನಾ.ಕಾರ೦ತ, ಪೆರಾಜೆ
ಸೋಮವಾರ, ಆಗಸ್ಟ್ 17 , 2015

ಜುಲೈ ಕೊನೆ ವಾರ ಪುತ್ತೂರಿನಲ್ಲಿ 'ದಮಯಂತಿ ಪುನರ್ ಸ್ವಯಂವರ' ಯಕ್ಷಗಾನ ಪ್ರದರ್ಶನ. ರೆಂಜಾಳರ 'ಬಾಹುಕ'ನ ಪಾತ್ರ. ಹಾಸ್ಯಗಾರರನೇಕರ ಬಾಹುಕನನ್ನು ನೋಡಿದ್ದೆ. ಅವರೆಲ್ಲರಿಗಿಂತ ಇವರದು ಭಿನ್ನ. ಮುಖವರ್ಣಿಕೆಯಲ್ಲಿ ಹೊಸತನ. ರಂಗನಡೆಯಲ್ಲಿ ಸ್ವ-ನಿಲುವು. ಬಾಹುಕನೊಳಗೆ ನಳನೊಬ್ಬನಿದ್ದಾನೆ ಎನ್ನುವ ಎಚ್ಚರ. ಸತ್ಯವನ್ನು ಬಿಡದ ಸೂಕ್ಷ್ಮತೆ. ಹಾಸ್ಯದ ಸೋಂಕಿಲ್ಲದ ಗಂಭೀರತೆ. ಪಾತ್ರ ತುಂಬಾ ಇಷ್ಟವಾಯಿತು.

ಎರಡೂವರೆ ದಶಕದಿಂದ ರೆಂಜಾಳ ರಾಮಕೃಷ್ಣ ರಾವ್ (71) ಅವರನ್ನು ನೋಡುತ್ತಿದ್ದೇನೆ. ಅವರ ಪಾತ್ರಾಭಿವ್ಯಕ್ತಿಯಲ್ಲಿ ಪೂರ್ಣ ಪ್ರಮಾಣದ ಯಕ್ಷಗಾನವಿದೆ. ಬದಲಾವಣೆಯ ಕಾಲಘಟ್ಟದ ಹೊಸತನದ ಮುಂದೆ ಇವರ ವೇಷಕ್ಕೆ ಪ್ರತ್ಯೇಕ ಮಣೆ. ಪಾತ್ರ, ಕಾಲ, ಔಚಿತ್ರಕ್ಕೆ ಅನುಸರಿಸಿದ ನಡೆ. ಈ ಸಿದ್ಧಿಗೆ ಐದು ದಶಕದ ತಪಸ್ಸಿದೆ. 'ದಿಢೀರ್ ಕಲಾವಿದ'ರಾಗಿ ಮೇಲೆದ್ದು ಬಂದವರಲ್ಲ!

ಬಾಲ್ಯ ಶಿಕ್ಷಣ ಹಾಗೂ ಪಾದಾರ್ಪಣೆ

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ರೆಂಜಾಳ ವೆಂಕಟ್ರಮಣಯ್ಯ ಮತ್ತು ಯಮುನಮ್ಮ ದಂಪತಿಯ ಪ್ರಥಮ ಪುತ್ರನಾಗಿ ಜನಿಸಿದ ರೆಂಜಾಳರು 9ನೇ ತರಗತಿ ಕಲಿತವರು. ಆರಂಭದಲ್ಲಿ ಕುದ್ಕಾಡಿ ವಿಶ್ವನಾಥ ರೈ ಅವರಿಂದ ಭರತನಾಟ್ಯದ ಬಾಲಪಾಠ ಪಡೆದು, ಆ ಬಳಿಕ ಅಡ್ಕಸ್ಥಳ ನಾರಾಯಣ ಶೆಟ್ಟಿ, ಕುಡಾಣ ಗೋಪಾಲಕೃಷ್ಣ ಭಟ್‌, ಕೊಕ್ಕಡ ಈಶ್ವರ ಭಟ್‌ ಮೊದಲಾದವರಲ್ಲಿ ಯಕ್ಷಗಾನ ನಾಟ್ಯಾಭ್ಯಾಸ ಮಾಡಿದರು.

ರಾಮಕೃಷ್ಣ ರಾಯರ ತನು ಮಾಗಿದೆ. ಮನ ಮಾಗಿಲ್ಲ. ಕಲೆಯಲ್ಲಿ ಅದೇ ಭಕ್ತಿ, ಶ್ರದ್ಧೆ. ಹಗಲಿಡೀ ವಯೋಸಹಜ ಅಸಹಾಯಕತೆ. ರಾತ್ರಿ ಹೊಂತಕಾರಿ ಹಿರಣ್ಯಾಕ್ಷ, ರಕ್ತಬೀಜ, ಇಂದ್ರಜಿತು ಆವೇಶವಾಗುತ್ತಾರೆ. ತನ್ನ ಇಪ್ಪತ್ತೆರಡನೇ ಹರೆಯದಲ್ಲಿ ರಂಗಪ್ರವೇಶ. ಹಾಗಾಗಿ ಆರಂಭದ ದಿವಸಗಳ ಸ್ತ್ರೀಪಾತ್ರಗಳ ಲಾಲಿತ್ಯ, ವೈಯಾರ, ಬಿನ್ನಾಣಗಳು ಗಮನ ಸೆಳೆಯುತ್ತಿದ್ದುವು. ಇವರ ದೇವಿ ಮಹಾತೆಯ ದೇವಿಯ ಪಾತ್ರಕ್ಕೆ ಕೈ ಮುಗಿಯದವರಿಲ್ಲ. ಸುಭದ್ರೆ, ದಮಯಂತಿ, ಕೊರವಂಜಿ, ಶಶಿಪ್ರಭೆ ಮುಂತಾದ ಪಾತ್ರಗಳಿಗೆ ಮನ ಸೋಲದವರಿಲ್ಲ. ಎತ್ತರದ ನಿಲುವಿನ, ಸುರದ್ರೂಪಿ ರೆಂಜಾಳರು ಪುರುಷ ಪಾತ್ರಗಳಿಗೂ ಸೈ ಎನಿಸಿಕೊಂಡವರು. ಪುರುಷ ವೇಷಗಳಲ್ಲಿ ರಕ್ತಬೀಜ, ಹಿರಣ್ಯಾಕ್ಷ, ಇಂದ್ರಜಿತು, ಕೌಂಡ್ಲಿಕ, ನಳ, ಹರಿಶ್ಚಂದ್ರ, ದೇವೇಂದ್ರ, ಅರ್ಜುನ ಮುಂತಾದವು ಇವರ ಪ್ರೀತಿಯ ಪಾತ್ರಗಳಾಗಿವೆ.

ಸವ್ಯಸಾಚಿ ಕಲಾವಿದ

ಅಗರಿ ಶ್ರೀನಿವಾಸ ಭಾಗವತರ ಆಶೀರ್ವಾದದೊಂದಿಗೆ ಗೆಜ್ಜೆ ಕಟ್ಟಿ ಕೂಡ್ಲು ಮೇಳದಿಂದ ಮೇಳದ ಬದುಕು ಆರಂಭ. ಅಲ್ಲಿ ನಾಲ್ಕು ವರ್ಷ ತಿರುಗಾಟ. ಬಳಿಕ ಮೂರು ವರುಷ ಬಣ್ಣದ ಬದುಕಿಗೆ ಹಿನ್ನಡೆ. ಮುಂದೆ ಚೌಡೇಶ್ವರಿ ಮೇಳದ ಒಂದು ವರುಷದ ತಿರುಗಾಟ. ಆ ನಂತರ ನಾಲ್ಕು ದಶಕಕ್ಕೂ ಮಿಕ್ಕಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳವೊಂದರಲ್ಲೇ ವ್ಯವಸಾಯ. ಈಗವರು ಪ್ರಧಾನ ವೇಷಧಾರಿ.

ದೇವಿ ಮಹಾತ್ಮೆಯ 'ಶ್ರೀದೇವಿ' ಪಾತ್ರವು ರೆಂಜಾಳರಲ್ಲಿ ಹೆಚ್ಚು ಗೌರವ ಪಡೆಯುತ್ತದೆ. ಅಭಿವ್ಯಕ್ತಿಯಲ್ಲಿ ದೇವಿಯ ಅಲೌಕಿಕ ಶಕ್ತಿಯ ಅನಾವರಣ. ರಂಗವನ್ನು ನೋಡುತ್ತಾ ನಿಂತರೆ ಯಕ್ಷಗಾನ ಮರೆತುಹೋಗಿ ದೈವತ್ವದ ಭಾವ ಮೂಡುವಂತಹ ಛಾಪು. ಉಯ್ಯಾಲೆಯಲ್ಲಿ ಕುಳಿತ ದೇವಿಗೆ ಕೈಮುಗಿದು, ತಲೆಬಾಗಿ ನಮಸ್ಕರಿಸಿದವರೆಷ್ಟೋ. ಒಂದು ಪಾತ್ರವು ಪ್ರೇಕ್ಷಕರಲ್ಲಿ ಎಷ್ಟು ಮತ್ತು ಹೇಗೆ ಪರಿಣಾಮ ಬೀರಬಹುದು ಎನ್ನುವುದಕ್ಕೆ ರೆಂಜಾಳರ ದೇವಿ ಸಾಕ್ಷಿಯಾಗಿ ಕಣ್ಣೆದುರು ನಿಲ್ಲುತ್ತದೆ.

ರೆಂಜಾಳ ರಾಮಕೃಷ್ಣ ರಾವ್
ಜನನ : 1944
ಜನನ ಸ್ಥಳ : ಮರ್ಕಂಜ ಗ್ರಾಮ
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಕೂಡ್ಲು , ಚೌಡೇಶ್ವರಿ , ನಂತರ ನಾಲ್ಕು ದಶಕಕ್ಕೂ ಮಿಕ್ಕಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳವೊಂದರಲ್ಲೇ ತಿರುಗಾಟ. ಪ್ರಧಾನ ವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಪುರುಷ ಹಾಗೂ ಸ್ತ್ರೀ ಪಾತ್ರಗಳಿಗೂ ಪ್ರಸಿಧ್ಧಿಯ ಅದ್ಭುತ ಕಲಾವಿದ
ಪ್ರಶಸ್ತಿಗಳು:
  • ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ
  • ಸುಳ್ಯ ತಾಲೂಕು ಕನ್ನಡ ಸಿರಿ ಪ್ರಶಸ್ತಿ
  • ಮಚ್ಚಾರು ನಾರಾಯಣ ಭಟ್‌ ಪ್ರಶಸ್ತಿ
  • ಕುಕ್ಕುಂದೂರು ದಿ.ವೆಂಕಟ್ರಾವ್ ಪ್ರಶಸ್ತಿ
  • ವನಜ ರಂಗಮನೆ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು

ಸ್ತ್ರೀ ಪಾತ್ರಗಳಿಗೂ ಸೈ

ಈಚೆಗೆ ಕಟೀಲಿನಲ್ಲಿ 'ಯಕ್ಷಮಿತ್ರ ನಮ್ಮ ವೇದಿಕೆ' ವಾಟ್ಸಪ್ ಬಳಗವು ಪ್ರದರ್ಶನವೊಂದನ್ನು ಆಯೋಜಿಸಿತ್ತು. ಅಂದಿನ ಕೊನೆಯ ಪ್ರಸಂಗ ಶ್ರೀನಿವಾಸ ಕಲ್ಯಾಣ. ರೆಂಜಾಳರದು 'ಕೊರವಂಜಿ'. ಕಲಾಭಿಮಾನಿಗಳು ಮೆಚ್ಚಿದ ಪಾತ್ರ. ಪಾತ್ರಶಿಲ್ಪವೊಂದು ವಾಸ್ತವತೆಯತ್ತ ಇಣುಕದೆ ಪಾತ್ರಕಾಲದಲ್ಲೇ ಸಂಚರಿಸುವಂತೆ ಮಾಡುವ ಕೆಲವೇ ಕೆಲವು ಕಲಾವಿದರ ಸಾಲಲ್ಲಿ ರೆಂಜಾಳರಿದ್ದಾರೆ. ಸುಭದ್ರೆ, ದಮಯಂತಿ, ಕೊರವಂಜಿ, ಶಶಿಪ್ರಭೆ.. ವೇಷಗಳು ನೂತನ. ಸ್ತ್ರೀಪಾತ್ರಗಳು ವಶವಾಗುತ್ತಲೇ ಪುರುಷ ಪಾತ್ರದತ್ತ ವಾಲಿದರು. ದೇವೇಂದ್ರ, ಅರ್ಜುನ, ಕಾರ್ತವೀರ್ಯ, ಕೌಂಡ್ಲಿಕ, ಅತಿಕಾಯ, ಇಂದ್ರಜಿತು, ರಕ್ತಬೀಜ. ಹರಿಶ್ಚಂದ್ರ.. ಹೀಗೆ ವಿವಿಧ ಸ್ವರೂಪದ, ಭಾವಗಳ ಪಾತ್ರಗಳನ್ನು, ಅದರ ಸ್ವಭಾವದಂತೆ ಚಿತ್ರಿಸುವ ಸಾಮಥ್ರ್ಯವೇ ಅವರ ಯಶದ ಗುಟ್ಟು. ಸಂದರ್ಭ ಬಂದಾಗ ಬಾಹುಕ, ವಿಜಯ, ಪಂಡಿತ, ಮಕರಂದ.. ಪಾತ್ರಗಳಿಗೂ ಸೈ.

ಪೀಠಿಕೆ ವೇಷಗಳ ಸಭಾಕ್ಲಾಸಿನ ಸೊಗಸು, ರಂಗ ತುಂಬು ಹೆಜ್ಜೆಗಳು, ಪಾತ್ರಕ್ಕನುಸಾರವಾದ ಅರ್ಥಗಾರಿಕೆ, ಅಧಿಕವಲ್ಲದ ನಾಟ್ಯ, ಸಾಂಪ್ರದಾಯಿಕ ಬಣ್ಣಗಾರಿಕೆ, ಪೌರಾಣಿಕ ಆವರಣದೊಳಗೆ ತುಂಬಿಕೊಳ್ಳುವ ಅಭಿವ್ಯಕ್ತಿ, ನಿಜ ಬದುಕಿನಲ್ಲೂ ಹೊರೆಯಾಗದ ಸ್ನೇಹಶೀಲತೆ, ಪುರಾಣ ಜ್ಞಾನ, ಪಾತ್ರಗಳ ನಡೆಗಳಲ್ಲಿ ನಿಖರತೆ. ಚೌಕಿ ಮತ್ತು ರಂಗಸ್ಥಳ ನಿಷ್ಠ. ಅಗ್ಗದ ಪ್ರಚಾರಕ್ಕಾಗಿ ಪಾತ್ರವನ್ನು ಹಿಗ್ಗಾಮುಗ್ಗಾ ಜಗ್ಗಿಸುವ ಮನಃಸ್ಥಿತಿ ಇವರದಲ್ಲ.

ನಿಜ ಬದುಕಿನ ವಿನಯ ವ್ಯಕ್ತಿತ್ವದ ಶೋಭೆ. ಏರಿದ ಮೆಟ್ಟಿಲನ್ನು ಮರೆಯದ ಕೃತಜ್ಞ. ಹಿರಿತನಕ್ಕೆ ತಲೆಬಾಗುವ, ಪಾಂಡಿತ್ಯವನ್ನು ಗೌರವಿಸುವ, ಕಿರಿಯರ ಪ್ರತಿಭೆಯನ್ನು ಮೆಚ್ಚಿಕೊಳ್ಳುವ ರೆಂಜಾಳರ ಗುಣಗಳು ನೂರಾರು ಸ್ನೇಹಿತರನ್ನು ಸಂಪಾದಿಸಿ ಕೊಟ್ಟಿದೆ. ಕಲೆಯು ಇವರನ್ನು ಮೆಚ್ಚಿದೆ.

'ಕಲಾವಿದ ಪರಿಪೂರ್ಣನಾಗಲು ಮೇಳದ ತಿರುಗಾಟದಿಂದ ಮಾತ್ರ ಸಾಧ್ಯ. ಈಗೀಗ ಯುವಕರು ಯಕ್ಷಗಾನತ್ತ ಒಲವು ತೋರಿಸುತ್ತಿರುವುದು ಉತ್ತಮ ಬೆಳವಣಿಗೆ. ಕೇವಲ ನಾಟ್ಯ ಕಲಿತರೆ ಕಲಾವಿದನಾಗಲಾರ. ರಂಗ ಮಾಹಿತಿ, ಪುರಾಣ ಜ್ಞಾನದ ಕಲಿಕೆಯೂ ಮುಖ್ಯ ಎನ್ನುತ್ತಾರೆ. ಹಲವು ಪ್ರಶಸ್ತಿ, ಸಂಮಾನಗಳು ರಾಯರನ್ನು ಅರಸಿ ಬಂದಿವೆ.

ಪ್ರಶಸ್ತಿ, ಪುರಸ್ಕಾರಗಳು

ಯಕ್ಷಗಾನದ ಚೌಕಿ ಮತ್ತು ರಂಗಸ್ಥಳಕ್ಕೆ ನಿಷ್ಠರಾಗಿ, ತನ್ನ ಸರಳ ಸಜ್ಜನಿಕೆಯಿಂದ ಕಿರಿಯ ಹಿರಿಯರೆಲ್ಲರ ಮನಗೆದ್ದ ಸಹೃದಯಿ ಕಲಾವಿದ ಇವರು. ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಸುಳ್ಯ ತಾಲೂಕು ಕನ್ನಡ ಸಿರಿ ಪ್ರಶಸ್ತಿ, ಮಚ್ಚಾರು ನಾರಾಯಣ ಭಟ್‌ ಪ್ರಶಸ್ತಿ , ಕುಕ್ಕುಂದೂರು ದಿ.ವೆಂಕಟ್ರಾವ್ ಪ್ರಶಸ್ತಿ ಸೇರಿದಂತೆ ಅನೇಕ ಸಮ್ಮಾನಗಳನ್ನು ಪಡೆದಿದ್ದಾರೆ. ಯಕ್ಷಗಾನ‌ವನ್ನು ತನ್ನ ಉಸಿರಾಗಿಸಿಕೊಂಡು ಮೇರು ಸಾಧನೆಗೈದ ಹಿರಿಯ ವೇಷಧಾರಿ ರೆಂಜಾಳ ರಾಮಕೃಷ್ಣ ರಾವ್‌ ಅವರು ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರವು ಕೀರ್ತಿಶೇಷ ವನಜಾಕ್ಷಿ ಜಯರಾಮ ಅವರ ನೆನಪಿನಲ್ಲಿ ಕೊಡಮಾಡುವ 2015ನೇ ಸಾಲಿನ "ವನಜ ರಂಗಮನೆ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವನಜ ರಂಗಮನೆ ಪ್ರಶಸ್ತಿ

ವನಜಾಕ್ಷಿ ಜಯರಾಮ ಬಣ್ಣ ಹಚ್ಚಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ವರಲ್ಲ ಈ ಅಮ್ಮ. ವೇದಿಕೆಯನ್ನಂತೂ ಒಮ್ಮೆಯೂ ಏರಿದವರಲ್ಲ. ಆದರೆ ಸಾವಿರಾರು ಕಲಾಸಕ್ತರನ್ನು ತನ್ನತ್ತ ಸೆಳೆದಿರುವ ಸಾಂಸ್ಕೃತಿಕ ಕಲಾ ಕೇಂದ್ರ ವೊಂದರ ಜನ್ಮದಾತೆ. ಇವರು ಯಕ್ಷಗಾನ ಹಿರಿಯ ಕಲಾವಿದ ಸುಜನಾ ಸುಳ್ಯ ಅವರ ಪತ್ನಿ, ರಂಗ ದಶಾವತಾರಿ ಜೀವನ್‌ರಾಂ ಸುಳ್ಯ ಅವರ ತಾಯಿ. ಹತ್ತಿರ ಎಲ್ಲೇ ಆಟ ಇದ್ದರೂ ತಪ್ಪದೆ ಹಾಜರಾಗಿ ಬೆರಗುಗಣ್ಣಿನಿಂದಲೇ ಆಟವನ್ನು ಸವಿಯುತ್ತಿದ್ದ ಸಹೃದಯೀ ಪ್ರೇಕ್ಷಕಿ. ಯಕ್ಷಗಾನವನ್ನು, ಕಲಾವಿದರನ್ನು, ಇನ್ನಿಲ್ಲದಷ್ಟು ಪ್ರೀತಿಸಿದ, ತಾನು ಉಪವಾಸವಿದ್ದು ಹಸಿದ ಕಲಾವಿದರ ಹಸಿವು ನೀಗಿಸಿದ, ದುಡಿಮೆಯೊಂದೇ ತನ್ನ ಬದುಕೆಂದು ನಂಬಿದ, ಸಾವಿರಾರು ಮಕ್ಕಳ ಪ್ರೀತಿ ವಾತ್ಸಲ್ಯಕ್ಕೆ ಮಡಿಲಾದ, ಅದೆಷ್ಟೋ ಕಲಾಪ್ರತಿಭೆಗಳು ರಂಗವೇರಲು ಕಾರಣರಾದ, ರಂಗಮನೆಯ ಎಲ್ಲ ಚಟುವಟಿಕೆಗಳ ಹಿಂದಿನ ಶಕ್ತಿಯಾದ ವನಜಾಕ್ಷಿ ಜಯರಾಮ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.

****************

ರೆಂಜಾಳರ ಕೆಲವು ವಿಡಿಯೊಗಳು




ಸುಳ್ಯದಲ್ಲಿ ನಡೆದ ಸಮಾರ೦ಭವೊದರಲ್ಲಿ






ರೆಂಜಾಳರ ಕೆಲವು ಚಿತ್ರಗಳು ( ಕೃಪೆ : ನಟೇಶ್ ವಿಟ್ಲ ಮತ್ತು ಅ೦ತರ್ಜಾಲದ ಅನಾಮಿಕ ಮಿತ್ರರು )



ಪ್ರಶಸ್ತಿ ಸಮಾರ೦ಭವೊದರಲ್ಲಿ


ಪ್ರಶಸ್ತಿ ಸಮಾರ೦ಭವೊದರಲ್ಲಿ


****************


ಕೃಪೆ : udayavani & yakshamatu.blogspot


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
satish(3/14/2016)
Nimma hesaralli RENJALA yemba shabda hege ? RENJALA Karkala talukinalli ondu putta halli hesaru. tamagu Renjalakku yenu sambandha ?




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ